ಶುಕ್ರವಾರ, ಜೂನ್ 21, 2013

ನನ್ನನ್ನೇ ಪ್ರೀತಿಸುವ ನನ್ನತನ ಒಲವು..

 ನನ್ನನ್ನೇ ಪ್ರೀತಿಸುವ ನನ್ನತನ ಒಲವು..

ಸ್ನೇಹಿತರೇ...

ಭಾವನಾ ಪ್ರಪಂಚ ಹಾಗೂ ನೈಜ ಪ್ರಪಂಚಗಳೆರಡರಲ್ಲೂ ಮನಸಿಗೆ ಸಂತಸ ನೀಡುವ ಆಲೋಚನೆ, ಆಕರ್ಷಣೆಗಳನ್ನೇ "ಒಲವು" ಅಟವಾ "ಪ್ರೀತಿ" ಎನ್ನಬಹುದೇನೋ... ಒಬ್ಬ ಮನುಷ್ಯನ ಮೇಲಿನ ಒಲವು ಆತ ಭ್ರೂಣದ ಸ್ಥಿತಿಯಲ್ಲಿರುವಾಗಲೇ ಪ್ರಾರಂಭ-ತಾಯಿಯಿಂದ. ನಂತರ ತಂದೆಯಿಂದ,ಪರಿಸರದಿಂದ,ಪ್ರಾಣಿ-ಪಕ್ಷಿಗಳಿಂದ,ಸ್ನೇಹಿತರಿಂದ, ನಂತರ ನೆಚ್ಚಿನ ಸಂಗಾತಿಯಿಂದ ಹೀಗೆ ಒಲವುಗಳು ಹಲವು.. ಎಲ್ಲವೂ ಅದೇ ಪ್ರೀತಿ ಆದರೆ ವಿಧ-ವಿಧದ ರೀತಿ.. ನನ್ನ ಮೇಲೆ ನನಗೇ ಒಲವಾದಾಗ ಮನಸ್ವರವಾಗಿದ್ದು ಹೀಗೆ. ಓದಿ ನೋಡಿ. ಎಲ್ಲ ಒಲವುಗಳು ನಿಮ್ಮದಾಗಲಿ. ನಿಮ್ಮಿಂದ ಬೇರೆಯವರಿಗೂ ಸಿಗಲಿ..


ಒಲವುಗಳು ತಿಳಿಮನಸ ಸಂತಸದ ಸುಲಿವು,
ಒಲವುಗಳೇ ಸೊಬಗು,ಸೊಬಗುಗಳೇ ಒಲವು..
ಮನಸುಗಳ ಒಲವುಗಳು ಹಲವು,
ಹುಡುಕಿ ಹೋದರೆ ನೋವು, ಹುದುಕಿ ಬಂದರೆ ನಲಿವು


ತನ್ನೆದೆಯ ಜ್ಯೋತಿಯನು ಧಾರೆ ಎರೆವ,
ತಾರೆಗಳ ಸೂರೆಗೊಳಿಪ ಆ ಸೂರ್ಯದೇವ..
ಭುವಿಯ ಮಡಿಲನು ಸಲಹುತಿರುವ
ಭಾವಾನುರಾಗಕೆ ಏನೆಂದು ಹೇಳಲಿ, ಒಲವೆನ್ನದೇ..?


ಭಾವನೆಗೆ ತಡೆ ಇಟ್ಟು, ವೇದಬನೆಗೆ ತಲೆ ಕೊಟ್ಟು,
ಜೀವಗಳ ಜೊತೆ-ಜೊತೆಗೆ ಪಣತೊಟ್ಟು..
ತಾಯಿ ಸೇವೆಯಲೆ ನಲಿವು ಕಾಣುವ
ಧೀರ-ಯೋಧರ ಭಾವಾಂತರಂಗಕೇನೆನ್ನಲಿ, ಒಲವೆನ್ನದೇ..?

ನಮ್ಮೆದೆಯ ನೋವನು, ತನ್ನ ಮನದಲೇ ತಿಳಿದು,
ಯಾತನೆಯ ಅಪ್ಪುವ ದೇವರೋಬ್ಬಳೇ ತಾಯಿ..
ಮಾತೆಯ ಮಡಿಲಲ್ಲಿ ಸವಿದಿದ್ದ ಪ್ರೀತಿಯ
 ಭಾವಸ್ಪರ್ಷಕೇನೆನ್ನಲಿ, ಒಲವು ಎನ್ನದೇ..?


ಹಸಿರೆಲೆಯ ಹೊಳಪಿಸಿ ಜಾರಿ ಹೋಗುವ,
ಮುಂಜಾನೆ ಮಂಜಿನಾ ಹನಿಯಂತೆ..
ಮನದಲ್ಲಿ ಪುಟ್ಟ ದೀಪವ ಬೆಳಗಿಸಿದ
ನಲ್ಲೆಯ ಸ್ನೇಹಕೇನೆನ್ನಲಿ, ಒಲವೆನ್ನದೇ..?


ತಾಯಿ ಮಮತೆಯೇ ಒಲವು..
ತಂದೆ ಸಲಹುಗಳು ಒಲವು..
ಹೃದಯ ಮಂದಿರ ಬೆಳಗಿಸಿದ,
ನಲ್ಲೆ ಪ್ರೀತಿಯೇ ಒಲವು...


ಸೈನಿಕರ ತ್ಯಾಗ ಒಲವು..
ಭುವಿಯ ಆಶ್ರಯವು ಒಲವು..
ಕಟುಕನಿಗೇ ನೆರಳುಣಿಸೋ,
ತರುಗಳ ನೀತಿ ಒಲವು..


ನನ್ನನ್ನೇ ಪ್ರೀತಿಸುವ ನನ್ನತನ ಒಲವು..
ಒಲವುಗಳು ಹಲವು...
ಹುಡುಕಿ ಹೋದರೆ ನೋವು,ಹುಡುಕಿ ಬಂದರೆ ನಲಿವು...



ಶನಿವಾರ, ಮೇ 25, 2013

ಸುಪ್ತವಾಗಿರು ಓ ಇನಿಯೇ..

ಸುಪ್ತವಾಗಿರು ಓ ಇನಿಯೇ..

ಎಲ್ಲೋ ಒಂದು ದಿನ ಮನಸ್ಸಿಗೆ ಬಂದಿದ್ದು... ಅನುಭವವಿಲ್ಲದೇ ಬರೆದಿದ್ದೇನೆ..ಓದಿ,, ಇಷ್ಟವಾದರೆ ಪ್ರೋತ್ಸಾಹಿಸಿ..

ನಿನ್ನ ಮೋಹದ ಛಾಯೆಯೇ ಬೇಡ ,
ಹೋಗು ನೀ ಮಾಯೇ..
ಸಹಜ ಬಾಳಿಗೆ ಸನಿಹ ಬಾರದೇ,
ಸುಪ್ತವಾಗಿರು ಓ ಇನಿಯೇ..

 

ಮನಸಿನ ಮಾತನು ಕೇಳದ ಕಿವಿಗೆ,
ಕನಸಿನ ದನಿಯೇ ನಾಟಿತೆನಗೆ..
ಕಲ್ಪನೆಯೇ ನಿಜವೆಂದು ಭಾವಿಸಿದೆ
ಅಲ್ಪನಾಗಿಯೇ ಉಳಿದೆ ಕೊನೆಗೆ..

 

ಸೇರಿತ್ತು ಆ ನಿನ್ನ ಹೆಸರಿನ ಮಾಲೆ,
ನನ್ನದೆನ್ನುವ ಅಂಕಿತದಲಿ..
ಆತ್ಮಗೌರವಕೆಸೆದ ದ್ರೋಹವದು
ನಿನ್ನ ಹಾಳು ನೆನಪಿನಲಿ.


ಸಾಗರದಿ ಮುಳುಗಿ ಸಾವೆ ಬಂದರೂ,
ನಗುತಿದ್ದೆ ನಾ ನಿನ್ನ ನೆನೆದಂತೆ..
ಹೋಗಿರುವೆ ನೀ ದೂರ ಬಹುದೂರ ಈಗ
ಮೌನಿಯೊಳಗಿನ ಮಾತಂತೆ..

 

ಮತ್ತೆ ಬಂದರೆ ಸತ್ತುಬಿಡುವೆನು,
ಸುತ್ತದಿರು ನೆನಪಿನ ಬಂಧನ..
ಬತ್ತಲಾರದೆ ಇನ್ನು ಉಳಿದಿದೆ,
ಮಿಥ್ಯವಲ್ಲದ ರೋಧನ..


ಹುಚ್ಚು ಪ್ರೇಮದ ಸ್ವಚ್ಛ ನೆನಪಲಿ,
ಅಚ್ಚಳಿಯದೆ ಉಳಿದಿರುವೆ ನೀನು,
ನೀನಿಲ್ಲದ ನನ್ನತನವ ಉಳಿಸಲೆಂದೇ,
 ಬದುಕಿ ಬಾಳ್ವೆನು ನಾನು..

ನಿನ್ನ ಮೋಹದ ಛಾಯೆಯೇ ಬೇಡ ,
ಹೋಗು ನೀ ಮಾಯೇ..
ಸಹಜ ಬಾಳಿಗೆ ಸನಿಹ ಬಾರದೇ,
ಸುಪ್ತವಾಗಿರು ಓ ಇನಿಯೇ..